ಪಿಲ್‍ಚಾರ್ಡ್ -
ಕ್ಲೂಪಿಯಿಡೀ ಕುಟುಂಬಕ್ಕೆ ಸೇರಿದ ಕಡಲ ಮೀನು. ಹೆರಿಂಗ್ ಮೀನಿನ ಹತ್ತಿರ ಸಂಬಂಧಿ.  ಸಾರ್ಡಿನ ಪಿಲ್‍ಚರ್ಡಸ್ ಇದರ ವೈಜ್ಞಾನಿಕ ಹೆಸರು.  ಪಶ್ಚಿಮ ಮತ್ತು ನೈರುತ್ಯ ಯೂರೋಪ್, ಉತ್ತರ ಆಫ್ರಿಕ, ದಕ್ಷಿಣ ಐರ್ಲೆಂಡ್,  ಉತ್ತರ ಸಮುದ್ರದ ದಕ್ಷಿಣ ಭಾಗ; ಮೆಡಿಟರೇನಿಯನ್ನಿನ ಉತ್ತರ ಭಾಗ ಇತ್ಯಾದಿ ಪ್ರದೇಶಗಳ ಕರಾವಳಿಗಳಲ್ಲಿ ಕಂಡುಬರುತ್ತದೆ.  ಇದರಲ್ಲಿ ಅಟ್ಲಾಂಟಿಕ್ ಮತ್ತು ಮೆಡಿಟರೇನಿಯನ್ ಎಂಬ 2 ಉಪಪ್ರಭೇದಗಳೂ ಉಂಟು.  ಪ್ರೌಢ ಮೀನಿನ ಉದ್ದ ಸುಮಾರು 30 ಸೆಂ. ಮೀ. ಮರಿಗಳು ಸಾಮಾನ್ಯವಾಗಿ 13-16 ಸೆಂ.ಮೀ ಉದ್ದ ಇರುವುವು.  ಈ ಹಂತದಲ್ಲಿ ಇವನ್ನು ಸಾರ್ಡಿನ್‍ಗಳೆಂದು ಕರೆಯಲಾಗುವುದು.  ಪಿಲ್‍ಚಾರ್ಡ್ ಮೊಟ್ಟೆ ಇಡುವುದು ಬೇಸಗೆಯಲ್ಲಿ. ಇದರ ಮೊಟ್ಟೆಗಳು ಬೇರೆ ಮೀನುಗಳ ಮೊಟ್ಟೆಗಳಂತಲ್ಲದೆ ನೀರಿನ ಮೇಲೆ ತೇಲುತ್ತವೆ.  ಪಿಲ್‍ಚಾರ್ಡ್‍ಗಳು ಪ್ಲಾವಕ ಭಕ್ಷಿಗಳು. ಪಿಲ್‍ಚಾರ್ಡ್ ಒಳ್ಳೆಯ ಆಹಾರ ಮೀನೆಂದು ಹೆಸರಾಗಿದೆ. 

ಜಾಗತಿಕ ಮಟ್ಟದ ಮತ್ಸ್ಯೋದ್ಯಮದಲ್ಲಿ ಈ ಮೀನಿನ ಉದ್ಯಮ ಹೆರ್ರಿಂಗ್ ಮೀನಿನದರಷ್ಟೇ ಪ್ರಧಾನವಾಗಿದೆ.  1938 ರಲ್ಲಿ ಪಿಲ್‍ಚಾರ್ಡ್ ಮೀನಿನ ಉತ್ಪನ್ನ 326,000 ಟನ್ನಗಳಷ್ಟು ಇತ್ತು.  1965  ರಿಂದ 1967 ರ ವರೆಗಿನ ಅವಧಿಯಲ್ಲಿ 499,000 ರಿಂದ 603,000 ಟನ್ನುಗಳಷ್ಟು ಹೆಚ್ಚಿತು.  ಈ ಪ್ರಭೇದವನ್ನು ಪೋರ್ಚುಗಲ್, ಮೊರಾಕೊ, ಸ್ಪೆನ್ ಮತ್ತು ಯುಗೋಸ್ಲಾವಿಯಾ ದೇಶಗಳಲ್ಲಿ ಸಾರ್ಡಿನ್ ಎಣ್ಣೆ ತಯಾರಿಕೆಗೆ ಬಹಳವಾಗಿ ಬಳಸುತ್ತಾರೆ. ಇದಲ್ಲದೆ, ಈ ಮೀನನ್ನು ಒಣಗಿಸಿ ಉಪ್ಪು ಸೇರಿಸಿ, ಹೊಗೆ ಕೊಟ್ಟು ಡಬ್ಬಗಳಲ್ಲಿ ತುಂಬಿ ಮಾರುವುದುಂಟು.  ಸಾರ್ಡಿನ ಹುಡಿ ತಯಾರಿಸುವುದಕ್ಕೂ ಉಪಯೋಗಿಸುತ್ತಾರೆ. ಈ ಮೀನುಗಳನ್ನು ಉಪ್ಪು ಹಾಕಿ ಹದ ಮಾಡಿದ ಅನಂತರ ಒಟ್ಟು ಮಾಡಿ ದೊಡ್ಡ ಮೆದೆಗಳಾಗಿ ಇಡುತ್ತಾರೆ. 4 ವಾರಗಳಲ್ಲಿ ಬಹಳ ಉಪಯುಕ್ತವಾದ ಎಣ್ಣೆ ಒಸರುತ್ತದೆ.  ಬಳಿಕ ಈ ಮೀನುಗಳನ್ನು ತೊಳೆದು ಡಬ್ಬಿಗಳಲ್ಲಿ ತುಂಬಿಸಿ ರಫ್ತು ಮಾಡುವುದಿದೆ.
(ಎಂ.ಎ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ